ಅಬುಲ್ ಅಲಾ ಅಲ್ - ಮ ಅರ್ರಿ		
	
ಶ್ರೇಷ್ಠ ಅರಬ್ಬೀ ಕವಿ, ಚಿಂತಕ, ಸಾಹಿತಿ. ಪೂರ್ತ ಹೆಸರು ಅಬುಲ್ ಅಲಾ ಅಹಮದ್ ಬಿನ್ ಅಬ್ದುಲ್ಲಾ ಬಿನ್ ಸುಲೈಮಾನ್ ಅಲ್ ಮ ಅರ್ರಿ. ಉತ್ತರ ಸಿರಿಯದ ಮ ಅರ್ರತುನ್ ನು ಮಾನ್‍ನಲ್ಲಿ ಜನಿಸಿದ. ಸಿಡುಬಿನ ಪ್ರಕೋಪಕ್ಕೆ ಒಳಗಾಗಿ ತನ್ನ ನಾಲ್ಕನೆಯ ವಯಸ್ಸಿನಲ್ಲೇ ಕುರುಡನಾದ.  ತಂದೆಯಿಂದ ಪರಂಪರಾಗತ ವಿಜ್ಞಾನ ಮತ್ತು ಕಲೆಗಳ ಶಿಕ್ಷಣವನ್ನು ಪಡೆದು ದೊಡ್ಡ ವಿದ್ವಾಂಸನಾದ. ಚಿಕ್ಕ ವಯಸ್ಸಿನಲ್ಲೇ ಅರಬ್ಬೀ ಕವನಗಳನ್ನು ರಚಿಸಿದ. ಬಾಗ್ದಾದಿನಲ್ಲಿ ಇದ್ದ ಎರಡು ವರ್ಷಗಳಲ್ಲಿ ಅನೇಕ ಸಾಹಿತಿಗಳ, ವಿದ್ವಾಂಸರ ಪರಿಚಯ ಮಾಡಿಕೊಂಡ. ಆದರೆ ಅಲ್ಲಿ ಅವನ ಹೊಸ ಸಂಪ್ರದಾಯದ ಕಾವ್ಯ ಕಟುಟೀಕೆಗೆ ಗುರಿಯಾದ್ದರಿಂದ ಹುಟ್ಟೂರಿಗೆ ಹಿಂದಿರುಗಿದ. ಕುರುಡತನ, ಅಸಂಪನ್ನತೆ, ತಾನು ಹತ್ತಿರ ಇಲ್ಲದಿರುವಾಗ ತನ್ನ ಪ್ರೀತಿಯ ತಾಯಿಯನ್ನು ಕಳೆದುಕೊಂಡುದು, ವಿರೋಧಿಗಳ ಕಿರುಕುಳ-ಇವು ಈತನ ಬಾಳಿನ ರೀತಿಯನ್ನು ಬದಲಾಯಿಸಿದುವು. ಉಳಿದ ನಲವತ್ತಾರು ವರ್ಷಗಳನ್ನು ಬರೆವಣಿಗೆಯಲ್ಲೂ ತನ್ನ ಹತ್ತಿರ ಶಿಕ್ಷಣವನ್ನು ಪಡೆಯಲು ಬರುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವುದರಲ್ಲೂ ಕಳೆದ. ಸಮಕಾಲೀನ ಲೇಖಕರು ಈತನ ವಿದ್ವತ್ತಿನ ಪ್ರಯೋಜನವನ್ನು ಪಡೆಯಲು ಈತನೊಡನೆ ಪತ್ರವ್ಯವಹಾರ ನಡೆಸುತ್ತಿದ್ದರು. ಈತ ಕಟುವಾದ ಶಾಕಾಹಾರಿಯಾಗಿ ಮೊಟ್ಟೆಗಳನ್ನೂ ಹಾಲನ್ನೂ ತ್ಯಜಿಸಿದ.  ಉತ್ಕøಷ್ಟ ನೀತಿಪರನಾದ ಈತ ಉಪವಾಸ, ಪ್ರಾರ್ಥನೆಗಳೊಡನೆ ಇನ್ನೂ ಹೆಚ್ಚಿನ ಧರ್ಮನಿಷ್ಠೆ, ವಿಧಿನಿಯಮಗಳು ಇರಬೇಕೆಂದು ಉಪದೇಶಿಸಿದ್ದಾನೆ.
ಅಬುಲ್ ಅಲಾ ಸಂಪೂರ್ಣ ಮಾನವ ಜೀವನವನ್ನೇ ತನ್ನ ಕಾವ್ಯವಸ್ತುವಾಗಿ ತೆಗೆದುಕೊಳ್ಳುತ್ತಾನೆ. ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕುರಿತು ಚಿಂತನೆ ಮಾಡುತ್ತಾನೆ. ತನ್ನ ಕೃತಿಗಳಲ್ಲಿ ಈತ ಬಹಳ ನಿರ್ಭೀತನಾಗೂ ಸ್ವತಂತ್ರ ಚಿಂತಕನಾಗೂ ಕಂಡುಬರುತ್ತಾನೆ. ಸಾಂಪ್ರದಾಯಿಕ ವಿಚಾರದ ಮೂಲವನ್ನೇ ಅಲ್ಲಾಡಿಸಿ ಬಿಡುತ್ತಾನೆ. ಅಷ್ಟೆ ಅಲ್ಲ ಅವುಗಳನ್ನು ಪರಿಹಾಸ್ಯ ಮಾಡುತ್ತಾನೆ. 
	
ಇವನವೆಂದು ಹೇಳಲಾದ 60 ಕೃತಿಗಳಲ್ಲಿ ಸಕ್ತುಲ್‍ಜûನದ, ಲುಜೂಮಿಯಾತ್ ಬಹಳ ಪ್ರಸಿದ್ಧವಾಗಿವೆ. ಇವನ ಇನ್ನೊಂದು ಕೃತಿ ರಿಸಾಲತುಲ್ ಗುಫರಾನ್ ದಾಂತೆಯ ಡಿವೃನ್ ಕಾಮೆಡಿಯ ಮೇಲೆ ಪ್ರಭಾವ ಬೀರಿದೆಯೆಂದು ಪಾಶ್ಚಾತ್ಯ ವಿಮರ್ಶಕರ ಮತ. ಈತ ಪವಿತ್ರ ಕುರಾನನ್ನು ಅನುಕರಿಸಿ ಅಲ್ ಫುಸೂಲು ವಲ್ ಗಾಯಾತ್ ಎನ್ನುವ ಕೃತಿಯನ್ನು ರಮಣೀಯವಾದ ಗದ್ಯದಲ್ಲಿ ಬರೆದಿದ್ದಾನೆ. 
 
 
(ಎಂ.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ